ಎಲುಮುರಿಕೆಗಳು, ಕೀಲ್ತಪ್ಪಿಕೆಗಳು: ಮುರಿದುಹೋಗುವುದೂ ಕೀಲು ತಪ್ಪುವುದೂ ಮೂಳೆಗಳಿಗೆ ಆಗುವ ಸಾಮಾನ್ಯ ಗಾಯಗಳು, ಮೂಳೆ ಒಂದೇ ಸಮನಾಗಿರುವುದು ಎಲ್ಲಿಯಾದರೂ ತಪ್ಪ್ಪಿದ್ದರೆ ಎಲುಮುರಿಕೆ (ಫ್ರಾಕ್ಚರ್) ಎನಿಸಿಕೊಳ್ಳುತ್ತದೆ. ಮೇಲಿನ ಚರ್ಮ ಬಿರಿಯದೆಯೇ ಆದ ಎಲುಮುರಿಕೆ ಸರಳವೆಂದೂ ಚರ್ಮಕ್ಕೆ ಗಾಯವಾಗಿ ಮುರಿದ ಮೂಳೆ ತುಂಡುಗಳ ಕೊನೆಗಳು ಹೊರಗಣ ಗಾಳಿಗೆ ಸೋಕುವಂತಿದ್ದರೆ ಕಲೆತದ್ದೆಂದೂ (ಕಾಂಪೌಂಡ್) ಹೆಸರಿದೆ. ಎಲುಮುರಿಕೆ ಆಕಾರಕ್ಕೆ ತಕ್ಕಂತೆ, ಸುರುಳಿಯ, ಅಡ್ಡಡ್ಡನೆಯ, ಉದ್ದುದ್ದನೆಯ, ಕೋಸೆಯ ಸೊಟ್ಟಪಟ್ಟ ಬಗೆಯವು ವಿಂಗಡವಾಗುತ್ತವೆ, ಸರಳ ಎಲುಮುರಿಕೆಯಲ್ಲಿ ಸೊಂಕು ಹತ್ತುವಂತಿರದು. ಹೊರಗಾಳಿ ಸೋಕುವಂತಿದ್ದರೆ ಸೊಂಕು ಒಳ ಹೋಗುವುದು ಸುಲಭ. ಗಾಯವಾದ ಮೇಲೆ, ಮೂಳೆ ಚೂರುಗಳ ಕೊನೆಗಳ ಜೋಡಣೆಗೆ ತಕ್ಕಂತೆ, ಪುರ್ತಿ, ಅರೆಬರೆ, ಹಸೀಕಡ್ಡಿ (ಗ್ರೀನ್-ಸ್ಟಿಕ್) ತಾಟಿಕೊಂಡ (ಇಂಪ್ಯಾಕ್ಬೆಡ್) ನುಗ್ಗುನುರಿದ (ಕಮ್ಮಿನ್ಯುಟೆಡ್), ತಾಕುತೊಡಕಾದ (ಕಾಂಪ್ಲಿಕೇಟಡ್) ಮುರಿಕೆಗಳು ಏರ್ಪಡುತ್ತವೆ, ಮೂಳೆ ಮುರಿದು ಎರಡು ಬಿಡಿಯಾದ ತುಂಡುಗಳಾಗದೆ ಸುಮ್ಮನೆ ಬಾಗಿದ್ದರೆ ಅರೆಬರೆ, ಹಸಿಕಡ್ಡಿ ಮುರಿಕೆಯೆಂದೂ ಎರಡು ತುಂಡುಗಳಾಗಿದ್ದರೆ ಪುರ್ತಿ ಮುರಿಕೆ ಎಂದೂ ಇದೆ. ಗಾಯದ ರಭಸದಿಂದ ಮುರಿಕೆಯ ತುಂಡುಗಳ ಕೊನೆಗಳು ಒಂದರೊಡನೊಂದು ಸಿಕ್ಕಿಕೊಂಡಿರುವುದು ತಾಟಿಕೊಂಡ ಮುರಿಕೆ. ಮುರಿದು ಮೂರಕ್ಕೂ ಹೆಚ್ಚು ಚೂರುಗಳಾಗಿರುವುದೇ ನುಗ್ಗುನುರಿದ ಮುರಿಕೆ. ಎಲುಮುರಿಕೆಯೊಂದಿಗೆ ಅಕ್ಕಪಕ್ಕಗಳ ನರಗಳು, ಒಳಾಂಗಗಳೂ, ರಕ್ತನಾಳ ಮೊದಲಾದವಕ್ಕೂ ಹಾನಿಯಾಗಿರುವುದೇ ತಾಕುತೊಡಕಿನ ಮುರಿಕೆ. ರೋಗ ಹತ್ತಿ ಬಡಕಲಾಗಿರುವ ಮೂಳೆಗೆ ಕೊಂಚ ಪೆಟ್ಟು ತಗುಲಿದರೂ ಮುರಿವುದು ರೋಗದ (ಪ್ಯಾತಲಾಜಿಕಲ್) ಎಲುಮುರಿಕೆ.  ಕೀಲಲ್ಲಿ ಕೂಡಿರುವ ಮೂಳೆಗಳ ಕೊನೆಗಳು ಕೀಲನ್ನು ಬಿಟ್ಟು ಒಂದಕ್ಕೊಂದರ ಸಂಬಂಧ ತಪ್ಪಿರುವುದೇ ಕೀಲ್ತಪ್ಪಿಕೆ (ಡಿಸ್ಲೊಕೇಷನ್), ಸರಳ ಕೀಲ್ತಪ್ಪಿಕೆಯಲ್ಲಿ ಮೂಳೆ ಕೊನೆಗಳು ಗಾಳಿಗೊಡ್ಡಿರವು. ಆದರೆ ಚರ್ಮಕ್ಕೆ ಪೆಟ್ಟು, ಗಾಯಗಳಾಗಿಯೊ ಕೀಲ್ತಪ್ಪಿದಾಗ ಮೂಳೆಯ ಚೂಪು ಕೊನೆಗಳು ಜೋರಾಗಿ ಚರ್ಮದಲ್ಲಿ ತೂರಿದ್ದರಿಂದಲೊ ಅವು ಗಾಳಿಗೊಡ್ಡಿದ್ದರೆ ಕಲೆತದಕೀಲ್ತಪ್ಪಿಕೆ. ಕೆಲವೇಳೆ ಹುಟ್ಟಿನಿಂದಲೇ ಬರುವ ಕೀಲ್ತಪ್ಪಿಕೆ ಆಗ ಹುಟ್ಟಿದ ಕೂಸಿನಲ್ಲೇ ಕೀಲಿನ ರಚನೆಯಲ್ಲಿ ಕುಂದಾಗಿ ಕಾಣಿಸಿಕೊಳ್ಳುತ್ತದೆ. ಗಾಯದಿಂದ ಆಮೇಲೆ ಆದುದು, ಆರ್ಜಿತ(ಅಕ್ವೈರ್ಡ್) ಕೀಲ್ತಪ್ಪಿಕೆ. ಮೇಲಿಂದ ಮೇಲೆ ಒಂದೇ ಕೀಲಲ್ಲಿ ಕೀಲ್ತಪ್ಪಿಕೆ ಆಗುತ್ತಿರುವುದು ಮರುಕಳಿಕ (ರೆಕರೆಂಟ್) ಎಲ್ಲವೇ ಅಭ್ಯಾಸದ (ಹೆಬಿಚ್ಯುಯಲ್) ಕೀಲ್ತಪ್ಪಿಕೆ. ಕೀಲಿನ ಸುತ್ತು ಇರುವ ಕೀಲ್ಗವಚ. ತಂತುಗಟ್ಟುಗಳು (ಕ್ಯಾಪ್ಸುಲ್, ಲಿಗಮೆಂಟ್ಸ್‌) ಸಡಿಲ ಬೀಳುವುದರಿಂದ ರೋಗದ ಕೀಲ್ತಪ್ಪಿಕೆ ಆಗುವುದು. ಕೀಲ್ತಪ್ಪಿಸುವ ಪೆಟ್ಟು, ಗಾಯಗಳಿಂದ ಅದೇ ಹೊತ್ತಿನಲ್ಲಿ ಕೀಲಿನ ಒಂದೋ ಇನ್ನೂ ಹೆಚ್ಚೋ ಮೂಳೆಗಳೂ ಮುರಿದಿದ್ದರೆ ಎಲುಮುರಿಕೆ-ಕೀಲ್ತಪ್ಪಿಕೆ ಎನಿಸುವುದು.

ಕಾರಣಗಳು
ಸಾಕಷ್ಟು ಬಲವಾದ ಪೆಟ್ಟು, ಗಾಯಗಳಿಂದ ಎಲುಬು ಮುರಿಯುವುದು. ಮುಂದೋಳಿಗೆ ಏಟು ತಗಲಿ ಮುರಿವಂತೆ, ನೇರವಾದ ಹೊರಗಿನ ಗಾಯಗಳಲ್ಲಿ ಪೆಟ್ಟು ತಾಕಿದೆಡೆಯಲ್ಲೇ ಮೂಳೆ ಮುರಿಯುತ್ತದೆ. ಮರದ ಇಲ್ಲವೇ ಮಹಡಿಯ ಎತ್ತರದಿಂದ ಇದ್ದಕಿದ್ದ ಹಾಗೆ ಅಕಸ್ಮಾತ್ತಾಗಿ ಕೆಳಬೀಳುವಾಗ ಕೈ ನೀಡಿ ಊರುವಂತಾದಾಗ, ಪೆಟ್ಟು ಕೈಗೇ ತಾಗಿದರೂ ಏಟಿನಬಲ ದೂರದ ತೋಳಿಗೆ ತಾಕಿ ಮುರಿವಂತೆ, ಬಳಸಾಗೂ ಎಲುಬು ಮುರಿಯಬಹುದು. ಮುರಿದ ಮೂಳೆಯ ಕೊನೆಗಳಿಗೆ ತಗುಲಿಕೊಂಡಿರುವ ಸ್ನಾಯುಗಳ ಎಳೆತವೇ ಎದೆಗೂಡಿನ ಇಲ್ಲವೇ ಒಡಲಿನ ಒಳಾಂಗಗಳ ಗಾಯಗಳಿಗೆ ಕಾರಣ, ಪಕ್ಕೆಲುಬು ಮುರಿದಾಗ ಈಲಿಗೂ ಪುಪ್ಪುಸಗಳಿಗೂ ಗಾಯವಾಗುವುದು ಇದರ ಒಂದು ಉದಾಹರಣೆ.

ಎಳೆಗೂಸುಗಳೂ, ಮಕ್ಕಳಲ್ಲಿ ಸಾಕಷ್ಟು ಬಲಿಯದಿರುವುದರಿಂದಲೂ ವಯಸ್ಸಾದ ವರಲ್ಲೂ ಅದರಲ್ಲೂ ಹೆಂಗಸರಲ್ಲಿ, ಮೂಳೆ ಬಡಕಲಾಗಿರುತ್ತದೆ, ಬೇರೊಂದು ಅಂಗದಲ್ಲಿದ್ದು ಏಡಿಗಂತಿ (ಕ್ಯಾನ್ಸರ್) ಬಲು ಸಾಮಾನ್ಯವಾಗಿ ಮೂಳೆಗಳಿಗೆ ಹರಡಿಕೊಳ್ಳುವಂತೆ, ಎಲುಗಟ್ಟಿಗೂ (ಸ್ಕೆಲಿಟನ್) ಹತ್ತುವ ಅನೇಕ ರೋಗಗಳು ಮೂಳೆಗಳಲ್ಲಿ ತ್ರಾಣವಿಲ್ಲದಂತೆ ಮಾಡುವುವು. ಹಾಗಾಗಿದ್ದಾಗ, ಮೂಳೆ ಮುರಿಯಲು ಸಣ್ಣ ಪೆಟ್ಟೇ ಸಾಕಾಗುತ್ತದೆ. ಅಭ್ಯಾಸವಿಲ್ಲದ ಅಸಹಜ ಒತ್ತಡ ಮೂಳೆಯ ಮೇಲೆ ಬಿದ್ದರೆ, ದಣಿವಿನ (ಫೆಟೀಗ್) ಎಲುಮುರಿಕೆ ಆಗುವುದು. ತಾಸುಗಟ್ಟಳೆ ನಿಂತು ಇರುವಾಗ, ಬಲು ದೂರ ನಡೆದಾಗಲೂ ಹೀಗಾಗಬಹುದು. ಸೈನಿಕರಲ್ಲಿ ಹೀಗಾಗುವುದಕ್ಕೆ ನಡೆಯ ಎಲುಮುರಿಕೆ ಎಂದಿದೆ.

ಕೀಲಿನ ಬಲುಮೆಗೆ ಕಾರಣವಾಗಿ ಕೀಲನ್ನು ಕೂಡಿಸಿ ಹಿಡಿದಿಡುವ ತಂತುಗಟ್ಟುಗಳು, ಸ್ನಾಯುಗಳು, ಕೀಲ್ಗವಚಗಳನ್ನು ಒಡೆವಷ್ಟು ಜೋರಿನ ಪೆಟ್ಟಿನಿಂದ ಕೀಲು ತಪ್ಪುತ್ತದೆ. ನೀಳ ಮೂಳೆಯ ಉದ್ದಕ್ಕೂ ಬಲವಾದ ಒತ್ತಡಬಿದ್ದು, ಕೀಲಿನ ಸುತ್ತ ಇರುವ ಊತಕಗಳನ್ನೂ ಹರಿದು ಮೂಳೆಯ ಕೊನೆ ತೂರುವುದರಿಂದ, ಚೆನ್ನಾಗಿರುವ ಕೀಲೂ ಸಾಮಾನ್ಯವಾಗಿ ತಪ್ಪುವುದು. ನೇರವಾಗಿ ಕೀಲಿಗೇ ಏಟು ಬಿದ್ದರೂ ಕೀಲ್ತಪ್ಪಬಹುದು. 

ಕೀಲಿಗೆ ಹಿಂದೆಂದೋ ಗಾಯವಾಗಿ ಇಲ್ಲವೆ ಅದರ ಸುತ್ತಣ ಊತಕಗಳಿಗೆ ಏಟು ತಗುಲಿ ಸರಿಯಾಗಿ ವಾಸಿಯಾಗದಿದ್ದರೆ. ಮತ್ತೆಮತ್ತೆ ಕೀಲ್ತಪ್ಪುವುದೇ ಮರುಕಳಿಕ ಕೀಲ್ತಪ್ಪಿಕೆಗೆ ಕಾರಣ. ಆಮೇಲೆ ಆಗಾಗ್ಗೆ ಕೀಲ್ತಪ್ಪಲು ಹೆಚ್ಚು ಬಲವೇ ಬೇಕಿರದು. ಹಗರಿನ ಕೀಲಿನಲ್ಲಿ ತಪ್ಪಿಕೆಯಾಗಿ ಅರೆಬರೆ ಗುಣವಾಗಿದ್ದರೆ ಕೈ ಹಿಡಿದು ಸುಮ್ಮನೆ ಎಳೆದರೂ ತಲೆಯಿಂದ ಮೇಲಕ್ಕೆ ತೋಳನ್ನು ಎತ್ತಿದರೂ ಸುಲಭವಾಗಿ ಕೀಲ್ತಪ್ಪುವುದು ಇದರ ಉದಾಹರಣೆ. ಕೀಲ್ಗವಚದ ಬಲಗುಂದಿಸುವ, ಕೀಲನ್ನು ಕೆಡಿಸುವ ರೋಗಗಳಲ್ಲಿ ರೋಗದ ಕೀಲ್ತಪ್ಪಿಕೆ ಕೊಂಚ ಬಲದಿಂದಲೇ ಆಗುತ್ತದೆ.
ಲಕ್ಷಣಗಳು: ಏಟು ಹೇಗೆ ಯಾವುದರಿಂದ ಬಿತ್ತು, ಎಲ್ಲಿಗೆ ತಗಲಿತು ಎಂಬ ವಿಷಯಗಳು, ಆಗಿರುವ ಗಾಯಗಳು, ರೋಗಿಯ ನೋವು, ಅನುಭವ ಲಕ್ಷಣಗಳು, ಕಣ್ಣಿಗೆ ಕಾಣುವ ಗಾಯಗಳು, ಎಕ್ಸ್‌ಕಿರಣ ಪರೀಕ್ಷೆಗಳು ಮುಂತಾದವುಗಳಿಂದ ಎಲುಮುರಿಕೆಗಳನ್ನು ಕೀಲ್ತಪ್ಪಿಕೆಗಳನ್ನು ಪತ್ತೆ ಹಚ್ಚಬಹುದು ಗಾಯ, ಪೆಟ್ಟು ಹೇಗಾಯಿತೆಂದು ಗೊತ್ತಾದರೆ, ಎಲುಮುರಿಕೆ, ಕೀಲ್ತಪ್ಪಿಕೆ ಎಲ್ಲೆಲ್ಲಿ ಆಗಿರುವುದೆಂದು ಗುರುತಿಸಲು ಅನುಕೂಲ. ಅದರಲ್ಲೂ ಎಳೆಯ ಮಕ್ಕಳಿಗೆ ನೋವು ಎಲ್ಲಿ ಹೆಚ್ಚಾಗಿರುವುದೆಂದು ತಿಳಿಸಲು ತಿಳಿಯದು. ಸಣ್ಣ ಏಟಿಗೇ ಹೀಗಾಗಿದ್ದರೆ, ಅದರ ಹಿನ್ನೆಲೆಯಲ್ಲಿರುವ ರೋಗವನ್ನು ಪತ್ತೆ ಹಚ್ಚಲು ನೆರವಾಗುವುದು. ಮೂಳೆ ಮುರಿದಿದ್ದರೆ, ಕೀಲ್ತಪ್ಪಿದ್ದರೆ ಸಾಮಾನ್ಯವಾಗಿ, ಹಾಗಾಗಿರುವ ಎಡೆಯಲ್ಲಿ ಮಾತ್ರ ನೋವು ಕಂಡು, ಮುಟ್ಟಿದರೆ ಕೋಮಲವಾಗಿರುವುದು. ಪೆಟ್ಟು ಬಿದ್ದಿರುವ ಕೈಕಾಲನ್ನು ಬಳಸ ಹೋದರೆ ಕರಕರ ಸದ್ದಾಗುವುದು, ಇಲ್ಲವೇ ಗಾಯಗೊಂಡ ಕೈಕಾಲನ್ನು ಬಳಸದಂತಾಗಿರುವುದು. ಪೆಟ್ಟಾದ ಭಾಗ ಸೊಟ್ಟಗಿರುವುದೂ ಮುರಿದೆಡೆ ಊತ, ಮೇಲಿನ ಚರ್ಮದ ಬಣ್ಣದಲ್ಲಿ ಬದಲಾವಣೆ, ಮೂಳೆ ಅಸಹಜವಾಗಿ ಬಾಗಿರುವಿಕೆ, ಪೆಟ್ಟಾದ ಮೂಳೆಯ ಬಲವನ್ನು ಪರೀಕ್ಷಿಸಿದಾಗ ಪೆಟ್ಟಾದ ಕಡೆ ಕರಕರ ತಾಕುವ ಅರಿವಾಗುವುದೂ ಬಲು ಸಾಮಾನ್ಯವಾಗಿ ಎದ್ದುಕಾಣುವ ಅಂಗ ಲಕ್ಷಣಗಳೂ. ಆದರೆ, ತಾಟಿಕೊಂಡ ಎಲುಮುರಿಕೆಯಲ್ಲಿ ಅಲುಗಾಡಿಸಿದರೆ ಮುರಿದ ಕೊನೆಗಳೂ ಆಡುವುದೂ ಇಲ್ಲ, ಕರಕರ ಸದ್ದು ಬರುವುದೂ ಇಲ್ಲ.

ಪೆಟ್ಟಾದ ಕೀಲು ಸೊಟ್ಟನಾಗಿ ತೋರುವಿಕೆ, ಕೀಲು ಸುತ್ತಲೂ ಊತಕಗಳ ಊತ. ಕೀಲುಮೇಲಿನ ಚರ್ಮದ ಬಣ್ಣಗೆಡಿಕೆ, ಕೀಲ್ತಪ್ಪಿದ ಕೀಲನ್ನು ಬಳಸಲಾಗದಿರುವಿಕೆ. ಕೀಲನ್ನು ಆಡಿಸದಂತಿರುವಿಕೆ_ಇವೆಲ್ಲ ಕೀಲ್ತಪ್ಪಿರುವ ಕೀಲಲ್ಲಿ ಕಂಡುಬರುತ್ತವೆ. ಎಲುಮುರಿಕೆ, ಕೀಲ್ತಪ್ಪಿಕೆಗಳನ್ನು ಕಂಡುಕೊಳ್ಳಲು ಮುಂದಿನಿಂದಲೂ ಪಕ್ಕಗಳಿಂದಲೂ ತೆಗೆದ ಎಕ್ಸ್‌ಕಿರಣ ಚಿತ್ರಗಳು ನೆರವಾಗುವುವಲ್ಲದೆ, ಅವುಗಳ ಬಗೆ, ಗಾಯದ ಹರವು ಇವೆಲ್ಲ ತಿಳಿಯುವುದರಿಂದ ಚಿಕಿತ್ಸೆ ಹೇಗಿರಬೇಕೆಂದೂ ಕೇವಲ ಹೊರಗಿನ ಪರೀಕ್ಷೆಗಿಂತಲೂ ಚೆನ್ನಾಗಿ ಸೂಚಿಸುವುವು. ಗಾಯ, ಪೆಟ್ಟುಗಳ ಜೋರು, ರೋಗಿಯ ವಯಸ್ಸು, ಆರೋಗ್ಯಗಳಿಗೆ ತಕ್ಕ ಹಾಗೆ ಸೊಕ್ಕೆ (ಷಾಕ್) ಆಗಿ ರೋಗಿ ಸುಸ್ತಾಗುವುದುಂಟು.

ಮಾಯುವಿಕೆ
ಎಲುಮುರಿಕೆಗಳ ಕಾರಣ ಏನೇ ಇರಲಿ, ಅವು ಮಾಯುವ ಬಗೆ ಮಾತ್ರ ಒಂದೇ. ಬಲು ಬೇಗನೆ ಮುರಿದ ಕೊನೆಗಳಿಗೆ ಅಡ್ಡನಾಗಿ ಚಾಚಿ, ಮುರಿದ ತುಂಡುಗಳನ್ನು ಒಂದುಗೂಡಿಸುವ ಹೊಸ ಊತಕವನ್ನು ಗಾಯಗೊಂಡ ಮೂಳೆ ಕೂಡಲೆ ತಯಾರಿಸುತ್ತದೆ. ಮಾಯುವಾಗ ಮೊದಮೊದಲಲ್ಲಿ ಈ ಊತಕ ನಯ ಗಾರೆಯಷ್ಟು ಮೆತುವಾಗಿದ್ದು ಸುಲಭವಾಗಿ ಕೆಡಿಸುವಂತಿರುವುದು. ಬರಬರುತ್ತ ಮೈಯಲ್ಲಿನ ಮೂಳೆಯ ಖನಿಜಗಳು ಈ ಹೊಸ ಊತಕದಲ್ಲಿ ಸೇರಿಕೊಂಡು ಗಡುಸುಗಟ್ಟಿಸಿ ಮುರಿದಿರುವ ಚೂರುಗಳನ್ನು ಗಟ್ಟಿಯಾಗಿ ಒಂದರೊಡನೊಂದು ಅಂಟಿಸುತ್ತವೆ. ಗೋಟುಮೂಳೆ (ಕ್ಯಾಲಸ್) ಎಂಬ ಈ ಹೊಸ ಊತಕದಲ್ಲಿ ಖನಿಜಗಳಿರುವುದರಿಂದ, ಆಗತಾನೆ ತೆಗೆದ ಎಕ್ಸ್‌ಕಿರಣ ಚಿತ್ರದಲ್ಲಿ ಮಸಕಾಗಿ ಕಾಣಬರುತ್ತದೆ. ವಾಸಿಯಾದಂತೆಲ್ಲ ಇನ್ನೂ ಮುಂದೆ ಇದೇ ಬೆಳೆದ ಮೂಳೆಯಾಗಿ ಬದಲಾಗುವುದು. ಗೋಟುಮೂಳೆ ಎಂದಿನ ಮೂಳೆಯಂತಾದ ಹಾಗೆಲ್ಲ ಮುರಿದ ಎಲುಬಿನ ತುಂಡುಗಳ ಕೂಡಿಕೆ ಇನ್ನೂ ಬಿಗುವಾಗಿ, ಕೊನೆಗೆ ಮುರಿದ ಭಾಗವೂ ಸೇರಿ ಇಡೀ ಒಂದೇ ಮೂಳೆಯಾಗಿಬಿಡುತ್ತದೆ.

ಗಾಯದ ಬಗೆ, ಆಳ, ಹರವು, ಊತಕಗಳ ನಾಶಗಳಂತೆ, ಎಲುಮುರಿಕೆ ಮಾಯುವುದರಲ್ಲಿ ಹಲವಾರು ಅಂಶಗಳಿವೆ. ಏಟು, ಗಾಯ ಜೋರಾಗಿದ್ದರೆ ಎಲುಮುರಿಕೆಯೊಂದಿಗೆ ಅದಕ್ಕೆ ಒದಗಿಸುತ್ತಿದ್ದ ರಕ್ತದ ಪುರೈಕೆ ಕಡಿದೇ ಹೋಗಬಹುದು. ಆಗ ಮುರಿದ ಮೂಳೆ ವಾಸಿಯಾಗುವಂತೆ ಹೊಸ ನೇರ್ಪಿಕ ಊತಕಗಳನ್ನು ಹುಟ್ಟಿಸಲಾರದು. ಮುರಿದ ಮೂಳೆ ತುಂಡುಗಳ ಕೊನೆಗಳು ಮತ್ತೆ ಸರಿಗೂಡದಿದ್ದರೆ, ಸರಿಯಾಗಿ ಜೋಡಿಸುವ ಹೊಸ ಊತಕ ಬಿಟ್ಟಿರುವ ಜಾಗವನ್ನು ತುಂಬಿ ವಾಸಿಮಾಡಲು ಎಷ್ಟೊ ಅನುಕೂಲ. ಮೂಳೆ ತುಂಡುಗಳ ನಡುವೆ, ಸ್ನಾಯು, ಕಂಡರಗಳ (ಟೆಂಡನ್ಸ್‌) ತೆರನ ಊತಕ ಅಡ್ಡಬಿದ್ದರೆ, ತೆಗೆದುಹಾಕಬೇಕು. ಮುರಿದ ತುಂಡುಗಳು ಕೂಡಿಕೊಳ್ಳಬೇಕಾದರೆ, ಮೂಳೆ ಮೇಲೆ ಬೀಳುವ ಭಾರಕ್ಕೆ ತಕ್ಕಂತೆ 4 ರಿಂದ 10 ವಾರಗಳ ತನಕ ಅಲುಗಾಡದಂತೆ ಇರಿಸಬೇಕು. ಮೂಳೆಗಳನ್ನು ಒಂದು ಬಾರಿ ಒಂದು ನಿಲುವಿನಲ್ಲಿ ಜೋಡಿಸಿಟ್ಟ ಮೇಲೆ ಆಗಾಗ್ಗೆ ಕದಲಿಸದೆ ಹಾಗೇ ಇರಿಸದಿದ್ದರೆ, ಹೊಸದಾಗಿ ತಯಾರಾದ ಗೋಟುಮೂಳೆ ಹಾಳಾಗಿ ಮೂಳೆ ತುಂಡುಗಳನ್ನು ಒಂದುಗೂಡಿಸಲಾರದು. ಮೂಳೆಯ ಕೊನೆಗಳು ಒಂದುಗೂಡುವ ಮುನ್ನವೇ ಅಲುಗಾಡದೆ ಇರಿಸುವ ಸಲಕರಣೆಯನ್ನು ತೆಗೆದುಹಾಕಿಬಿಟ್ಟರೆ, ಅಲ್ಲಾಟದಿಂದ ಗೋಟುಮೂಳೆಯ ಬಲಗುಂದಿ ಮೂಳೆಯ ಕೊನೆಗಳು ಮತ್ತೆ ದೂರ ಸರಿವುವು. 

ಮುರಿದ ಎಲುಬುಗಳನ್ನು ಸರಿಯಾಗಿ ಜೋಡಿಸಿಟ್ಟು, ಸಾಕಷ್ಟು ಎಚ್ಚರದಿಂದ ಅಲುಗಾಡದೆ ಇರಿಸಿದರೂ ಮುರಿದೆಡೆಯಲ್ಲಿ ಸೋಂಕು ಸೇರಿಬಿಟ್ಟಿತೆಂದರೆ, ಹೊಸ ಸರಿಪಡಕ ಗೋಟುಮೂಳೆ ಊತಕವನ್ನು ಹಾಳುಗೆಡವಿ, ಮಾಯುವುದನ್ನು ನಿಧಾನಗೊಳಿಸಬಹುದು ಇಲ್ಲವೇ ತೀರ ಅಡ್ಡಿಯೇ ಆಗಬಹುದು. ಎಲುಮುರಿಕೆ ಮಾಯುವುದರಲ್ಲಿ ಹಿಂದೆ ಬಲು ಮುಖ್ಯ ಎನಿಸಿದ್ದ ವಯಸ್ಸು, ಉಣಿಸು, ಆರೋಗ್ಯ, ಜೀವಾತುಗಳು, ಕುಲ ಇವುಗಳ ಪಾತ್ರ ಈಗ ಅಷ್ಟು ಮುಖ್ಯವಲ್ಲ ಎನಿಸಿದೆ. ಬೆಳೆದವರಿಗಿಂತ ಮಕ್ಕಳಲ್ಲಿ ಎಲುಬು ಬೇಗನೆ ಕೂಡಿಕೊಳ್ಳುವುದಾದರೂ ಮಾಯುವುದಕ್ಕೆ ಮುಪ್ಪು ಅಡಚಣೆಯೂ ಅಲ್ಲ, ಕಷ್ಟಕೊಡುವುದೂ ಇಲ್ಲ.

ಕೀಲ್ತಪ್ಪಿಕೆಗಳಲ್ಲಿ, ಮೂಳೆಗಳನ್ನು ಕೀಲಿನಲ್ಲಿ ಚೆನ್ನಾಗಿ ಹಿಡಿದಿರುವ ಸ್ನಾಯುಗಳು, ತಂತುಗಟ್ಟಗಳು, ಕಂಡರಗಳು ಕೀಲ್ಗವಚಗಳಿಗೂ ಗಾಯವಾಗಿರುವುದು. ಮೆತುವಾದ ಈ ಊತಕಗಳ ಹರಿದ ಅಂಚುಗಳ ನಡುವೆ ವಾಸಿಯಾಗುವಾಗ ಕಲೆಗಟ್ಟುತ್ತವೆ. ಮೂಳೆಗಳು ಮತ್ತೆ ಸರಿಯಾದ ಜಾಗದಲ್ಲಿ ಇರಲಿ, ಇಲ್ಲದಿರಲಿ ಇವು ಕೂಡಿಕೊಳ್ಳಲು ಅಡ್ಡಿಯೇ ಇಲ್ಲ. ಮುರಿದ ಮೂಳೆಗಳಿಗಿಂತಲೂ ಗಾಯಗೊಂಡ ಕೀಲಿನ ಊತಕಗಳು ಬೇಗನೆ ಮಾಯುತ್ತವೆ.                        
ಮೇಲಿನ ಎರಡು ವಿಧಾನಗಳಿಂದಲೂ ಎಲುಮುರಿಕೆ, ಕೀಲ್ತಪ್ಪಿಕೆಗಳು ಮಾಯುತ್ತವೆ.

ಚಿಕಿತ್ಸಾ ಕ್ರಮ
ಎಲುಮುರಿಕೆ, ಕೀಲ್ತಪ್ಪಿಕೆಗಳ ಚಿಕಿತ್ಸೆ ಕೈಗೊಳ್ಳುವಾಗ ಹಲವಾರು ಅಂಶಗಳನ್ನು ಗಮನಿಸಬೇಕು. ರೋಗಿಯ ವಯಸ್ಸು, ಆರೋಗ್ಯದ ಮಟ್ಟ, ಕಸಬು, ಜೊತೆಗೇ ಆಗಿರುವ ಗಾಯಗಳು, ಎಲುಮುರಿಕೆಯ ಬಗೆ, ಆಗಿರುವ ಜಾಗ-ಇವನ್ನೆಲ್ಲ ಲೆಕ್ಕಿಸಬೇಕು.

ಕೀಲ್ತಪ್ಪಿಕೆ, ಎಲುಮುರಿಕೆ ಆಕಸ್ಮಿಕವಾಗಿ ಆಗಿದ್ದರೆ, ವಿಪರೀತವಾಗಿ ರಕ್ತ ಸುರಿವುದನ್ನು ಕಟ್ಟುಪಟ್ಟಿಗಳನ್ನೋ (ಬ್ಯಾಂಡೇಜಸ್) ತಿರುಚೊತ್ತನ್ನೋ (ಟೂರ್ನಿಕೆ) ಬಿರಿಸಿ ತುರ್ತಾಗಿ ನಿಲ್ಲಿಸಿ, ಗಾಯವಾಗಿ ಹರಿದಿರುವ ಚರ್ಮದ ಮೇಲೆ ಚೊಕ್ಕವಾದ ಕಟ್ಟುಪಟ್ಟಿ ಸುತ್ತಿ, ಗಾಯವಾದ ಕೈಕಾಲುಗಳನ್ನು ನೆಟ್ಟಗಿರಿಸಲು ಯತ್ನಿಸದೆ, ಇರುವ ಹಾಗೇ ಎಲುಮುರಿದ ಜಾಗದ ಮೇಲ್ಗಡೆಯ ಕೆಳಗಡೆಯ ಕೀಲುಗಳು ಕೂಡ ಆಡಿಸಲಾಗದ ಹಾಗೆ ಮೆತ್ತೆಗಳನ್ನು ಜೋಡಿಸಿರುವ ದಬ್ಬೆಪಟ್ಟಿಗಳಿಂದ ಕಟ್ಟಿಟ್ಟು, ವೈದ್ಯ ಪಾಲನೆ ದೊರೆವಲ್ಲಿಗೆ ಮೆಲ್ಲನೆ ಸಾಗಿಸಬೇಕು.
ಮುರಿದು ಜಾಗ ಬಿಟ್ಟಿರುವ ಎಲುಬಿನ ತುಂಡುಗಳನ್ನು ಮತ್ತೆ ಸರಿಯಾಗಿ ಜೋಡಿಸಿಟ್ಟು, ಮಾಯುವ ತನಕ ಅವುಗಳ ಕೊನೆಗಳು ಅಲುಗಾಡದಂತೆ ನೋಡಿಕೊಳ್ಳುವುದೇ ಸರಳ ಎಲುಮುರಿಕೆಯ ಚಿಕಿತ್ಸೆ. ಮುರಿದರೂ ಎಲುಬಿನ ಕೊನೆಗಳು ಅವುಗಳ ಜಾಗದಿಂದ ಕದಲದಿರುವ ಸಣ್ಣ ಎಲುಮುರಿಕೆಗಳಿಗೆ ಸರಿಪಡಿಸುವುದೇನೂ ಬೇಕಿರದು. ಅರೆಬರೆ ಎಲುಮುರಿಕೆಗಳು, ಮಕ್ಕಳಲ್ಲಾಗುವ ಬಹು ಪಾಲು ಎಲುಮುರಿಕೆಗಳು, ಬಲವಾದ ಸ್ನಾಯುಗಳು ತಗುಲಿಕೊಂಡಿರದ ಮೂಳೆಯ ಮುರಿಕೆಗಳನ್ನು ಕೇವಲ ಕೈಪಾಟಿಂದಲೇ ಸರಿಜೋಡಿಸಬಹುದು. ಮೂಳೆಯ ಮುರಿಕೆಯಾದ ಇಕ್ಕಡೆಗಳಲ್ಲೂ ಒಂದು ಕೈಯಿಂದ ಹಿಡಿದುಕೊಂಡು, ಸರಿಯಾದ ಜಾಗದಲ್ಲಿ ಕೂರುವಂತೆ ಕೈಗಳಿಂದ ನೀವಬೇಕು. 

ಬಲವಾದ ಸ್ನಾಯುಗಳು ತಗುಲಿಕೊಂಡಿರುವ ಮೂಳೆಗಳ ಇಲ್ಲವೇ ಬಲು ಚೂರುಚೂರಾಗಿರುವ ಎಲುಮುರಿಕೆಯನ್ನು ಸರಿಜೋಡಿಸಲು ಬಹಳ ಪಾಲನೆ, ಎಚ್ಚರಗಳಿರಬೇಕು. ಜೋರಾಗಿ ಎಳೆವ ಸ್ನಾಯುಗಳಿಂದ, ಮುರಿದ ಮೂಳೆಯ ತುಂಡುಗಳ ಕೊನೆಗಳು ದೂರದೂರ ಸರಿಯಬಹುದು. ಆಗ, ಮುರಿದ ಕೊನೆಗಳನ್ನು ಸರಿಜೋಡಿಸಿಟ್ಟು, ಸ್ನಾಯುಗಳ ಎಳೆತದ ಎದುರುವರ್ತಿಸಲು ಗಾಯಗೊಂಡ ಅವಯವವನ್ನು ಒಂದೇ ಸಮನಾಗಿ ಎಳೆದಿಡಬೇಕು. ಅವಯವದ ಕೊನೆಗೆ ಗೊತ್ತಾದ ಭಾರದ ಮಣ್ಣಿನ ಚೀಲಗಳನ್ನೋ ತೂಕದ ಬಟ್ಟುಗಳನ್ನೋ ತಗುಲಿಹಾಕಿ, ಗುರುತ್ವಕ್ಕೆ ಎದುರಾಗಿ ಎಳೆಯುತ್ತಿರುವಂತೆ ತೂಗಬಿಡುವುದೇ ಎಳೆತದ (ಟ್ರಾಕ್ಷನ್) ವಿಧಾನದ ಚಿಕಿತ್ಸೆ. ಭಾರವನ್ನು ಅಂಟುಪಟ್ಟಿಗಳು, ದಾರಗಳಿಂದ ಚರ್ಮಕ್ಕೆ ಅಂಟಿಸಿ, ಇಲ್ಲವೇ ಕೆಳಗಣ ಮೂಳೆಯಲ್ಲಿ ಲೋಹದ ಕಂಬಿ ತೂರಿಸಿ ಹಾಕಿಡಬಹುದು. ಕೆಲವೇಳೆ, ಕೊಂಚ ಕಾಲದ್ದಾದರೆ, ಕೈಗಳಿಂದ ಎಳೆದಿಟ್ಟರೆ ಸಾಕಾಗುವುದು. ಭಾರವನ್ನು ತೆಗೆದರೂ ಮುರಿದ ಮೂಳೆ ತುಂಡುಗಳ ಕೊನೆಗಳು ಇರಿಸಿದಲ್ಲೇ ಇರುವಂತೆ ವಾಸಿಯಾಗುವ ತನಕ ಈ ಎಳೆತವನ್ನು ಇಟ್ಟಿರಬೇಕು. ಕೆಲವು ಎಲುಮುರಿಕೆಗಳನ್ನು ಕೈಪಾಟಿಂದಾಗಲೀ 
ಎಳೆದಿಡುವುದರಿಂದಾಗಲೀ ಸರಿಪಡಿಸುವುದಾಗದು. ಬಲು ಜೋರಾಗಿ ಏಟು ಬಿದ್ದು ಸಿಡಿದಂತಾದ ಮೂಳೆ ತುಂಡುಗಳ ನಡುವೆ ಸ್ನಾಯು ತೆರನ ಊತಕಗಳು ತೆಗೆದುಹಾಕಲಾಗದಷ್ಟು ಆಳವಾಗಿ ಸೇರಿಬಿಟ್ಟಿದ್ದರೆ ಹೀಗಾಗುವುದು. ಆಗ ಒಳಗೆ ನಂಜು ಸೇರದಂತೆ ಎಚ್ಚರದಿಂದ ನೋಡಿಕೊಂಡು ಶಸ್ತ್ರಕ್ರಿಯೆಯಿಂದ ಮೂಳೆಯನ್ನು ಮತ್ತೆ ಸರಿಜೋಡಿಸಿ, ಹಲವಾರು ವಿಧಾನಗಳಲ್ಲಿ ಒಂದನ್ನು ಬಳಸಿ ಅಲುಗಾಡದಂತೆ ಇರಿಸಬೇಕಾಗುತ್ತದೆ.

ಸಣ್ಣ ಎಲುಮುರಿಕೆಗಳಿಗೆ ಸರಳ ಕಟ್ಟುಪಟ್ಟಿಗಳು, ತೂಗಾಸರೆಗಳಲ್ಲಿ (ಸ್ಲಿಂಗ್ಸ್‌) ಇರಿಸಿದ್ದರೆ ಸಾಕು. ಸರಿಜೋಡಿಸಲು ಕೈಪಾಟು ಬೇಕಾಗುವ ಎಲುಮುರಿಕೆಗಳನ್ನು ದಬ್ಬೆಪಟ್ಟಿಗಳಿಂದಲೊ ಪ್ಯಾರಿಸ್ಸಿನ ಗಚ್ಚುಗಿರಿಯ ಸುರುಳಿಗಳಿಂದ ಮಾಡಿದ ಅಚ್ಚುಗಳಲ್ಲೊ ಅಲುಗಾಡದಿರಿಸಬೇಕು. ಅವಯವವನ್ನು ಸರಿಯಾದ ಇರವಿನಲ್ಲಿ ಹಿಡಿದುಕೊಂಡು ಅಚ್ಚನ್ನು ಹಾಕಬೇಕು. ಗಚ್ಚುಗಿರಿ ಒಣಗಿ ಗಟ್ಟಿಯಾದ ಮೇಲೆ, ಗಾಯವಾದ ಅವಯವವನ್ನು ಕಾಪಿಡಲು ತೂಗಾಸರೆಗಳು, ಊರುಗೋಲುಗಳು, ಬೆತ್ತಗಳನ್ನೂ ರೋಗಿ ಬಳಸಬಹುದು. ಮೂಳೆಯ ಕೊನೆಗಳನ್ನು ಎಳೆದಿಟ್ಟಾಗ ಪಕ್ಕಗಳಿಗೆ ಹೊರಳದಂತೆ ಇರಿಸಲು ಉಸುಬಿನ ಚೀಲಗಳು, ತೂಗಾಸರೆಗಳು ಮತ್ತು ಅಚ್ಚುಗಳನ್ನು ಬಳಸಬಹುದು. ಶಸ್ತ್ರಕ್ರಿಯೆ ಆಗಬೇಕಾದ ಎಲುಮುರಿಕೆಗಳಲ್ಲಿ ಎಷ್ಟೊ ವೇಳೆ, ಲೋಹದ ಮೊಳೆಗಳು, ಸೂಜಿಗಳು, ತಂತಿಗಳು, ತಿರುಪುಗಳು, ಕಂಬಿಗಳು, ತಗಡು ಪಟ್ಟಿಗಳಿಂದ ಒಳಗೇ ಬಿಗಿಸುವುದುಂಟು. ಹಾಗೆ ಮಾಡಿದಾಗ, ಕೆಲವೇಳೆ ಹೊರಗೆ ದಬ್ಬೆಪಟ್ಟಿಗಳಾಗಲೀ ಅಚ್ಚುಗಳಾಗಲೀ ಬೇಕಿರದು. ಕೆಲವೇಳೆ ಕೊಂಚವಾಗಿ ಕೈಕಾಲು ಆಡಿಸಲೂ ಬಹುದು.

ಮೂಳೆಯ ಬಲವನ್ನು ಮೆಲ್ಲಗೆ ಅಮುಕಿ ಇಲ್ಲವೇ ಎಕ್ಸ್‌ಕಿರಣಗಳಿಂದ ಪರೀಕ್ಷಿಸಿದಾಗ ಗೋಟುಮೂಳೆ ಹೊರಗಣ ಆಸರೆಯ ನೆರವಿಲ್ಲದೆಯೆ ಮುರಿದ ಮೂಳೆ ಸರಿಗೂಡಿದಷ್ಟು ಬಲವಾಗುವ 
ತನಕ ಹಾಗೇ ಅಲುಗಾಡದಂತೆ ಇರಿಸಿರಬೇಕು. ತೂಗಾಸರೆಗಳು, ಅಚ್ಚುಗಳನ್ನು ತೆಗೆದುಬಿಟ್ಟ ಮೇಲೂ ಇನ್ನಷ್ಟು ಮಾಯುವ ತನಕ ಗಾಯಗೊಂಡ ಕೈಕಾಲನ್ನು ಬಳಸುವಂತಿಲ್ಲ.
ಸಾಕಷ್ಟು ವಾಸಿಯಾದ ಮೇಲೆ, ಗಾಯಗೊಂಡ ಕೈಕಾಲುಗಳಲ್ಲಿ ಬಲ ಬರುವಂತೆ ಮೆಲ್ಲನೆ ಅಂಗಸಾಧನೆಗಳನ್ನು ಮೊದಲು ಮಾಡಿದರೆ ಗಾಯಗೊಂಡವ ಆದಷ್ಟು ಬೇಗನೆ ಬಲು ಕಡಿಮೆ ಊನದೊಂದಿಗೆ ಕೆಲಸಕ್ಕೆ ಹಿಂತಿರುಗಬಹುದು. ಆಗ, ಅರೆಬರೆ ವಾಸಿಯಾಗಿರುವ ಮುರಿದ ಮೂಳೆಯನ್ನು ಕಾಪಿಡಲು, ತೆಗೆದು ಮುಚ್ಚುವ ಅಚ್ಚುಗಳು, ತೆಗೆಯಬಹುದಾದ ದಬ್ಬೆಪಟ್ಟಿಗಳು, ಊರುಗೋಲುಗಳು, ಬೆತ್ತಗಳು, ನಡೆಕೋಲುಗಳು, ಬಿಸಿನೀರಿನ ಕೊಳಗಳು, ತೂಗಾಸರೆಗಳು, ಬಿಗುಪಟ್ಟಿಗಳು ಒಳ್ಳೆಯ ಸಾಧನಗಳು. ಇವುಗಳ ಬಳಕೆಯಿಂದ ಅವಯವದಲ್ಲಿ ರಕ್ತದ ಸುತ್ತಾಟ ಚೆನ್ನಾಗಿದ್ದು, ಸ್ನಾಯುಗಳೂ ಬಡಕಲಾಗದಿರುವುವು. ಕೀಲುಗಳು ಬಿಗಿಹಿಡಿವುದೂ ತಗ್ಗುವುದು. ನೋವು ಕೊಡುವ ಯಾವ ಬಲವಾದ ಅಂಗಸಾಧನೆಯೂ ಕೂಡದು. ಗೋಟುಮೂಳೆ ಪುರ್ತಿಯಾಗಿ ಮೂಳೆಯಂತೆ ಬದಲಾಗಿ, ಎಲುಮುರಿಕೆ ಚೆನ್ನಾಗಿ ಕೂಡಿಕೊಂಡು ಎಲುಬಾದ ಮೇಲೆ ಕೈಕಾಲು ಪುರ್ತಿ ಆಡಿಸಲು ಒಪ್ಪಬಹುದು, ಬೇಕೆನಿಸಿದರೆ, ಎಲುಮುರಿಕೆ ಚೆನ್ನಾಗಿ ವಾಸಿಯಾದ ಮೇಲೆ, ಶಸ್ತ್ರಕ್ರಿಯೆಯಿಂದ ಒಳಗೇ ಹಾಕಿರಿಸಿದ ಲೋಹದ ಸಾಧನಗಳನ್ನು ಮತ್ತೆ ಶಸ್ತ್ರಕ್ರಿಯೆಯಿಂದ ತಗೆದು ಹಾಕಬಹುದು. ಈಗಿನ ಕಾಲದ ವಿಶಿಷ್ಟ ಲೋಹದ ಬಳಕೆಯಿಂದ ಹೀಗೆ ಮಾಡಬೇಕಿಲ್ಲ.

ಸರಳ ಎಲುಮುರಿಕೆಗಳಿಗಿಂತ ಕಲೆತದವಕ್ಕೆ ಚಿಕಿತ್ಸೆ ಮಾಡುವುದು ತೊಡಕಿನದು. ಚರ್ಮದಲ್ಲಾದ ಗಾಯದಿಂದ ಸೋಂಕು ಒಳನುಗ್ಗಿ ನೆಲೆಸುತ್ತದೆ. ಮುರಿದ ಮೂಳೆಯ ಕೊನೆಗಳಿಗೆ ಈ ಸೋಂಕು ಹೊಕ್ಕಿತೆಂದರೆ, ಹೊಸ ಎಲುಬು ತಯಾರಿಸುವ ಗೋಟುಮೂಳೆಯೇ ಹುಟ್ಟದೆ ಎಲುಮುರಿಕೆ ಮಾಯದಂತಾಗುತ್ತದೆ. ಸೋಂಕನ್ನು ಪುರ್ತಿ ಹೋಗಲಾಡಿಸಿದ ಹೊರತು ಮೂಳೆಯಂತೂ ಕೂಡಿಕೊಳ್ಳುವುದೇ ಇಲ್ಲ.

ಕಲೆತ ಎಲುಮುರಿಕೆಯಾದ ಕೆಲವೇ ತಾಸುಗಳಲ್ಲಿ ರೋಗಿಯನ್ನು ಕಂಡರೆ, ಕೂಡಲೇ ಶಸ್ತ್ರಕ್ರಿಯೆ ಕೈಗೊಳ್ಳಬೇಕಾಗುತ್ತದೆ. ಮುರಿದ ಮೂಳೆಯನ್ನು ಆಗ ಸರಿಜೋಡಿಸಿ ಒಳಗೆಲ್ಲೂ ಸೋಂಕು ನೆಲೆಸದಂತೆ ಮಾಡಲು ಸೋಂಕಿಗೆ ಒಡ್ಡಿ ಕೆಟ್ಟಿರುವ ಸುತ್ತಮುತ್ತಲ ಎಲ್ಲ ಊತಕಗಳನ್ನೂ ಕತ್ತರಿಸಿ ಹಾಕಿಬಿಡಬೇಕು. ಆ ಮೇಲೆ ಗಾಯವನ್ನು ಹೊಲೆಯಬಹುದು ಇಲ್ಲವೇ ಅದರ ಮೇಲೆ ಹೆಚ್ಚು ತೆರವು ಬಿಟ್ಟಿದ್ದರೆ ಚರ್ಮ ನಾಟಿ ಹಾಕಬಹುದು. ಇದಾದ ಮೇಲೆ ದಬ್ಬೆಪಟ್ಟಿಗಳನ್ನೊ ಅಚ್ಚುಗಳನ್ನೊ ಹಾಕಿ ಅಲುಗಾಡದಂತೆ ಇರಿಸಬೇಕು. ಸೋಂಕು ಹತ್ತದಂತೆ ನೋಡಿಕೊಳ್ಳಲು ಮುದ್ದುಗಳನ್ನೂ ಸೆಟೆಬೇನೆ (ಟೆಟನಸ್) ಬರದಂತೆ ರೋಧರಸಿಕೆಯನ್ನೂ (ಆಂಟಿಸೀರಂ) ಕೊಡಬೇಕು.

ಈ ಮುನ್ನೆಚ್ಚರಿಕೆಗಳು ಸಫಲವಾಗದಿದ್ದರೆ, ಚಿಕಿತ್ಸೆ ಮಾಡುವ ಮೊದಲೇ ಸೋಂಕು ಹತ್ತಿಬಿಟ್ಟಿದ್ದರೆ, ಸೋಂಕನ್ನು ಹೋಗಲಾಡಿಸಲು ಚಿಕಿತ್ಸೆ ಮೊದಲು ಆಗಬೇಕು. ಆಮೇಲೆ ಎಲುಮುರಿಕೆಯನ್ನು ಸರಿಪಡಿಸುವುದು. ಎಷ್ಟೊ ವೇಳೆ ಎಲುಮುರಿಕೆಯೊಂದಿಗಿನ ಸೋಂಕನ್ನು ಹೋಗಲಾಡಿಸುವುದೆಂದರೆ, ನಿಡುಗಾಲದ, ಕಷ್ಟವಾದ, ಕಟ್ಟುನಿಟ್ಟಿನ ಕೆಲಸ. ಆಗ ಮುರಿದ ಮೂಳೆ ಕೊನೆಗಳನ್ನು ಆದಷ್ಟು ಚೆನ್ನಾಗಿರಿಸಿಟ್ಟು ಹೊರ ಸೋಂಕು ಇನ್ನು ಒಳ ನುಗ್ಗದಂತೆ ಮುಚ್ಚಿಟ್ಟು ಮುಂದಿನ ಚಿಕಿತ್ಸೆ ಮಾಡಬೇಕು. ಸೋಂಕೆಲ್ಲ ಕಳೆಯಿತೆಂದರೆ, ಇದನ್ನು ಸರಳ ಎಲುಮುರಿಕೆಯಷ್ಟು ಸುಲಭವಾಗಿ ಚಿಕಿತ್ಸೆ ಮಾಡಬಹುದು.

ಎಲುಮುರಿಕೆ ಕೀಲಿನೊಳಕ್ಕೂ ಹರಡಿ ಕೀಲಿನ ನುಣುಪಾದ ಮೇಲುತಳಗಳನ್ನು ಹಾಳುಗೆಡವಿದ್ದರೆ ಇನ್ನೂ ತೊಡಕಿದ್ದಂತೆ. ಗಾಯದಿಂದ ಮೇಲುತಳ ಒರಟಾಗಿ ಅಡ್ಡಾದಿಡ್ಡಿಯಾಗಿ ವಾಸಿಯಾದರೆ, ಆಮೇಲೆ ಕೀಲು ಆಡಿಸದಂತಾಗಿ ನೋಯುತ್ತಿರುತ್ತವೆ. ಕೀಲಿನ ಮೇಲುತಳಗಳನ್ನು ಕೈಪಾಟನಿಂದಲೊ ಎಳೆದಿಡುವುದರಿಂದಲೊ ಎಂದಿನಂತೆ ಸರಿಜೋಡಿಸಲಾಗದಿದ್ದರೆ ಶಸ್ತ್ರಕ್ರಿಯೆ ಆಗಲೇಬೇಕಾಗುವುದು.

ಸರಳ ಕೀಲ್ತಪ್ಪಿಕೆಗಳನ್ನು ಕೈಪಾಟಿನಿಂದಲೇ ಸರಿಗೂಡಿಸಬಹುದು; ಕೆಲವು ಬಾರಿ ಎಳೆದಿಡಬೇಕಾಗಬಹುದು. ಕೀಲ್ತಪ್ಪಿಕೆಯನ್ನು ಸರಿಪಡಿಸಿದ ಮೇಲೆ, ಕೀಲಿನ ಸುತ್ತಲೂ ಗಾಯ ಚೆನ್ನಾಗಿ ಮಾಯುವ ತನಕ ಆ ಕೀಲನ್ನು ಕಟ್ಟುಪಟ್ಟಿಗಳು, ತೂಗಾಸರೆಗಳು, ದಬ್ಬೆಪಟ್ಟಿಗಳು. ಅಚ್ಚುಗಳಲ್ಲಿ ಅಲುಗಾಡದಂತೆ ಇರಿಸಬೇಕು. ಆಮೇಲೆ ಕೀಲನ್ನು ಮೆಲ್ಲಗೆ ಆಡಿಸಲು ಯತ್ನಿಸಬಹುದು. ನೋವಾಗುವುದಾದರೆ, ಬಲವಂತದಿಂದ ಕೀಲನ್ನು ಆಡಿಸಬಾರದು. ನೋವಿರದೆಯೇ ಕೊಂಚವಾದರೂ ಕೀಲು ಆಡುವ ತನಕ ಆ ಅವಯವವನ್ನು ಕೆಲಸಕ್ಕೆ ಬಳಸಕೂಡದು.
ಕಲೆತ ಕೀಲ್ತಪ್ಪಿಕೆಗಳಿಗೂ ಕಲೆತ ಎಲುಮುರಿಕೆಯ ಚಿಕಿತ್ಸೆಯ ವಿಧಾನಗಳೇ ಸಾಕಾಗುತ್ತವೆ. ಮರುಕಳಿಕ ಇಲ್ಲವೇ ಹುಟ್ಟಿಂದಲೇ ಬಂದ ಕೀಲ್ತಪ್ಪಿಕೆಗಳನ್ನು ಸರಿಪಡಿಸಲು ಕೆಟ್ಟಿರುವ ಕೀಲುಗಳ ಮರುರೂಪಿಕ ಶಸ್ತ್ರವೈದ್ಯವೇ ಬೇಕಾಗುತ್ತದೆ (ನೋಡಿ- ಎಲುನೇರ್ಪಿಕ-ಶಸ್ತ್ರವೈದ್ಯ).

ಎಲುಮುರಿಕೆ ಕೀಲ್ತಪ್ಪಿಕೆಗಳು ವಿಪರೀತ ಗಾಯ, ಪೆಟ್ಟುಗಳಿಂದಾಗುತ್ತವೆ. ಹೀಗೆ ಸಿಕ್ಕಾಪಟ್ಟೆ ಒಡೆದಿರುವ ಮೂಳೆ ಕೊನೆಗಳ ನಡುವೆ ಚೂರುಗಳು ಬಿಡಿಯಾಗಿ ಬಿದ್ದು ಸಿಕ್ಕಿಕೊಂಡಿರುತ್ತವೆ. ಆಗ ಕೀಲ್ತಪ್ಪಿಕೆಯನ್ನು ಸರಿಪಡಿಸುವ ಮೊದಲು ಈ ಬಿಡಿ ಚೂರುಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಬೇಕು. ಇಷ್ಟೆಲ್ಲ ಮಾಡಿ ಸರಿಗೂಡಿಸಿದರೂ ಪುರ್ತಿ ವಾಸಿಯಾಗಲು ಸರಳ ಕೀಲ್ತಪ್ಪಿಕೆಗಿಂತಲೂ ಹೆಚ್ಚು ಕಾಲ ಹಿಡಿಯುತ್ತದೆ.

ತಾಕುತೊಡಕುಗಳು: ಎಲುಮುರಿಕೆಯಿಂದೇಳುವ ತೊಡಕುಗಳಲ್ಲಿ ಮುಖ್ಯವಾದುವು ಮಾಯದಿರುವಿಕೆ, ಅವಯವ ಬಳಸಲಾರದಂತೆ ಮೂಳೆ ಕೊನೆಗಳು ಕೂಡಿರುವಿಕೆ, ಮೂಳೆಗಳು ಚೆನ್ನಾಗಿ ಕೂಡಿಕೊಂಡಿದ್ದರೂ ಅದರ ಬಳಕೆಗೆ ಅಡ್ಡಿಯಾಗಿರುವಿಕೆ. ಮುರಿದ ಮೂಳೆ ಮಾಯದಿರಲು ಕಾರಣಗಳು ಹಲವಾರು. ಸಾಕಷ್ಟು ಅಲುಗಾಡದಂತೆ ಇರಿಸಿಕೆ, ಸೋಂಕು, ಮೂಳೆಯೆಲ್ಲ ಚೂರಚೂರಾಗೊ, ವಿಪರೀತ ಗಾಯವಾಗೊ, ಬಹುಪಾಲು ಮೂಳೆಗೆ ಸಾಕಷ್ಟು ರಕ್ತ ಒದಗಣೆ ತಪ್ಪುವುದು. ಕೆಲವು ವೇಳೆಗಳಲ್ಲಿ ಮುರಿದ ಮೂಳೆ ಕೂಡಿಕೊಳ್ಳದೆ ಹಾಗೇ ಉಳಿವುದಕ್ಕೆ ಕಾರಣವೇ ಗೊತ್ತಾಗದು.

ಸಾಮಾನ್ಯವಾಗಿ ಮೂಳೆಯನ್ನು ಮತ್ತೆ ಸರಿಜೋಡಿಸದಿದ್ದರೆ, ಅದು ಸೊಟ್ಟನಾಗಿ ಕೂಡಿಕೊಂಡು ಕೈಕಾಲು ಸೊಟ್ಟನಾಗೇ ಉಳಿವುದು. ಗಾಯ, ಪೆಟ್ಟುಗಳಿಂದ ಅವಯವದ ಬಹುಪಾಲು ಮೂಳೆಯೇ ಹಾಳಾಗಿ ಬಿಟ್ಟರೂ ಹೀಗೇ ಸೊಟ್ಟನಾಗುವುದು. ಆಗ ಅವಯವವನ್ನು ಉಳಿಸಿಕೊಳ್ಳಬೇಕಾದರೆ ಸೊಟ್ಟಗಿರುವುದನ್ನು ಒಪ್ಪಿಕೊಳ್ಳಲೇಬೇಕು. ಮಕ್ಕಳಲ್ಲಿ ಮೂಳೆ ಬೆಳೆವ ಕೇಂದ್ರಗಳಿಗೆ ಪೆಟ್ಟಾದರೂ ಮುಂದೆ ಆ ಭಾಗ ಸೊಟ್ಟನಾಗೇ ಬೆಳೆಯುತ್ತದೆ.

ಅಪಾರವಾಗಿ ಮುರಿದಿರುವುದರಿಂದ ಚೆನ್ನಾಗಿ ವಾಸಿಯಾಗುವಂತೆ ಬಹಳ ಕಾಲ ಅಲುಗಾಡದಂತೆ ಇರಿಸಿಕೆ, ಕಲೆತ ಎಲುಮುರಿಕೆಗಳಲ್ಲಿ ಸೊಂಕು ಸೇರಿಬಿಟ್ಟು ವಾಸಿಯಾದಾಗ ಬೆಳೆದ ದಪ್ಪನೆಯ ಕಲೆಗಟ್ಟು (ಸ್ಕಾರ್), ಇಲ್ಲವೆ ಅವಯವವನ್ನು ಅಲುಗಾಡದಂತೆ ಇರಿಸಿದಾಗ ಗಾಯ ಮಾಯುವುದರಿಂದೆದ್ದ ದಟ್ಟನೆಯ ಕಲೆಗಟ್ಟು- ಇವು ಎಲುಮುರಿಕೆ ಚೆನ್ನಾಗಿ ವಾಸಿಯಾದರೂ ಅವಯವವನ್ನು ಬಳಸಲಾಗದಂತೆ ಆಗುವ ಸಾಮಾನ್ಯ ಕಾರಣಗಳು. ಕೀಲುಗಳು ಕೇವಲ ಸಣ್ಣ ಏಟುಗಳಿಂದಲೇ ಗಡಸಾಗಿಬಿಡಬಹುದು. ಇದರ ಕಾರಣ ತಿಳಿದಿಲ್ಲ.

ಕೀಲಿನಲ್ಲಿ ನೋವು ಕೀಲು ಗಡುಸಾಗುವುದೂ ಕೀಲ್ತಪ್ಪಿಕೆ ಮರುಕಳಿಸುವುದೂ ಕೀಲ್ತಪ್ಪಿಕೆಯ ಮುಖ್ಯ ತೊಡಕುಗಳು. ಕೀಲ್ತಪ್ಪಿಕೆಯನ್ನು ಸರಿಪಡಿಸದಿದ್ದರೆ, ಗಾಯದಿಂದ ಸರಿಪಡಿಸಲಾಗದಷ್ಟು ಹಾನಿಯಾಗುವುದು, ಮಾಯುವಾಗ, ಅಲುಗಾಡದೆ ಇರಿಸಿದ್ದಾಗ ಕೀಲಿನ ಸುತ್ತ ಆಗುವ ಬಲು ದಪ್ಪನೆಯ ಕಲೆಗಟ್ಟೂ ಈ ನೋವು, ಗಡುಸುತನಗಳಿಗೆ ಕಾರಣ. ಕೀಲಿನ ಸುತ್ತಮುತ್ತಣ ಊತಕಗಳ ಗಾಯ ಚೆನ್ನಾಗಿ ವಾಸಿಯಾಗದಿದ್ದರೆ, ಕೀಲಿನ ಕೂಡಿಸುವ ಮೇಲುತಳಗಳು ಹಾಳಾಗಿದ್ದರೆ ಕೀಲ್ತಪ್ಪಿಕೆ ಮರುಕಳಿಸುವುದು.

ಮೂಳೆ ನಾಟಿಕೆ: ಮುರಿದ ಮೂಳೆಯ ಕೊನೆಗಳು ಸರಿಯಾಗಿ ಕೂಡಿಕೊಳ್ಳದಿದ್ದಾಗ ಅವಕ್ಕೆ ಅಡ್ಡನಾಗಿ ಒಂದೆರಡು ಬೇರೆಡೆಯ ಮೂಳೆ ಚೂರುಗಳನ್ನು ಇರಿಸುವ, ನಡುವೆ ತುಂಬುವ ಶಸ್ತ್ರಕ್ರಿಯಾವಿಧಾನವಿದು. ಈ ತೆರಪಿನಲ್ಲಿ ಮೂಳೆ ಕೊನೆಗಳು ಒಂದುಗೂಡುವಂತೆ ಗೋಟುಮೂಳೆ ಬೆಳೆಸಲು ಇವು ನೆರವಾಗುತ್ತವೆ. ಇನ್ನೊಬ್ಬರ, ಪ್ರಾಣಿಯ, ಇಲ್ಲವೇ ಮೂಳೆ ಭಂಡಾರದಿಂದ ತಂದ ಮೂಳೆಗಿಂತಲೂ ರೋಗಿಯದನ್ನೇ ಇನ್ನೊಂದು ಅಂಗ ದಿಂದ ತೆಗೆದು ನಾಟಿ ಹಾಕಿದರೆ ಚೆನ್ನಾಗಿ ಕೂಡಿಕೊಳ್ಳುವುದು. ಮೂಳೆಯ ಬಹುಪಾಲು ಹಾಳಾಗಿ ಹೋಗಿದ್ದರೂ ಸೊಟ್ಟುಗಳನ್ನು ಸರಿಪಡಿಸಲಾಗದಿದ್ದರೂ ಬೇರಾವ ಬಗೆಗಳಿಂದಲೂ ಮೂಳೆ ಕೂಡಿಕೊಳ್ಳುವ ಸಂದರ್ಭ ಕಾಣದಿದ್ದರೂ ಮೂಳೆಯ ನಾಟಿ ಹಾಕಬೇಕಾಗುತ್ತದೆ.				(ಬಿ.ಎಚ್ಎ.; ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ